ವರ್ತಮಾನದ ವರ್ಧಮಾನ
*ಆಚಾರ್ಯಶ್ರೀ
ವರ್ಧಮಾನಸಾಗರರು
ಇಂದು ಆಚಾರ್ಯ ಶ್ರೀಗಳ ೫೭ ನೆಯ ದೀಕ್ಷಾ ಮಹೋತ್ಸವ, ಈ ನಿಮಿತ್ತ ಲೇಖನ ಬರೆದಿದ್ದೇನೆ.
ಅವರ ಪಾದಾರವಿಂದಗಳಲ್ಲಿ ತ್ರಿವಾರ ನಮೋಸ್ತು.
ಶ್ರೀ ವರ್ಧಮಾನಸಾಗರರು ಇಪ್ಪತ್ತನೇ ಶತಮಾನದ ಪ್ರಥಮಾಚಾರ್ಯ ಚಾರಿತ್ರಚಕ್ರವರ್ತಿ ಶ್ರೀ ಶಾಂತಿಸಾಗರ ಮುನಿ ಮಹಾರಾಜರ ಪರಂಪರೆಯ ಪಂಚಮ ಪಟ್ಟಾಚಾರ್ಯರು. ಮಧ್ಯಪ್ರದೇಶದ ಪ್ರಾಚೀನ ನಗರ ಗುಲಶನಾಬಾದ ವರ್ತಮಾನದಲ್ಲಿ ಸನಾವಾದ ಎಂಬ ಹೆಸರಿನಿಂದ ಕರೆಸಿಕೊಳ್ಳುವ ಐತಿಹಾಸಿಕ ಮಹತಿ ಹೊಂದಿರುವ ಪ್ರದೇಶವಾಗಿದೆ. ಈ ಸನಾವದ ಗ್ರಾಮವು ಸುಮಾರು ೧೫ ಕ್ಕೂ ಹೆಚ್ಚು ಜನ ತ್ಯಾಗಿಗಳ ಜನ್ಮಭೂಮಿ ಎಂದು ಗೌರವಕ್ಕೆ ಪಾತ್ರವಾಗಿದೆ.
ಈ ಪುಣ್ಯಭೂಮಿಯಲ್ಲಿ ಶ್ರೀ ಕಮಲಚಂದ್ರ ಹಾಗೂ ಶ್ರೀಮತಿ ಮನೋರಮಾ ದೇವಿ ದಂಪತಿಗಳ ಉದರದಿಂದ ಭಾದ್ರಪದ ಶುಕ್ಲ ಸಪ್ತಮಿ ೧೮ ಡಿಸೆಂಬರ ೧೯೫೦ (ವಿಕ್ರಮ ಸಂ. ೨೦೦೭)ರಲ್ಲಿ ಹದಿಮೂರನೆಯ ಸಂತಾನದ ರೂಪದಲ್ಲಿ ಬಾಲಕನ ಜನನ ವಾಯಿತು. ದಶಲಕ್ಷಣ ಮಹಾಪರ್ವದ ಉತ್ತಮ ಆರ್ಜವ ಧರ್ಮ ದ ದಿನ ಹುಟ್ಟಿದ ಕೂಸನ್ನು ಕಂಡು ತಾಯಿ ಹರ್ಷಿತಳಾಗಿದ್ದರೂ ಮುಖದಲ್ಲಿ ವೇದನಾಭರಿತ ನೋವಿನ ಛಾಯೆ ನೆಲೆಸಿತ್ತು. ಅವಳ ಮನೋವೇದನೆಗೆ ಇರುವ ಕಾರಣವೇನೆಂದರೆ ಮೊದಲು ಹುಟ್ಟಿದ ೧೨ ಸಂತಾನವೂ ಹುಟ್ಟುತ್ತಿರುವಂತೆ ಅಸು ನೀಗಿದ್ದವು. ದಂಪತಿಗಳಿಬ್ಬರು ತಮ್ಮ ಮನೋಮನದಲ್ಲಿ ಹುಟ್ಟಿದ ಕೂಸಿಗೆ ದೀರ್ಘಾಯು ದೊರೆಯುವಂತೆ ದೇವ ದೇವನಲ್ಲಿ ಪ್ರಾರ್ಥಿಸುತ್ತಿದ್ದರು. ಸಕಲ ರೀತಿಯಿಂದ ಸದೃಢನಾಗಿದ್ದ ಬಾಲಕನಿಗೆ ಯಶವಂತ ನೆಂದು ನಾಮಕರಣ ಮಾಡಿದರು.
ಯಶವಂತನ ಬಾಲ್ಯದ ಪಾಲನೆ ಪೋಷಣೆ ‘ಖಂಡವಾ ದಲ್ಲಿ ಅವನ ಮಾಮಾ- ಮಾಮಿ ಯರ ಆಶ್ರಯದಲ್ಲಾಯಿತು. ಪ್ರಾರಂಭದ ಶಿಕ್ಷಣ ಜನ್ಮಸ್ಥಳವಾದ ‘ಸನಾವಾದ’ದ ಬಾಲ ಮಂದಿರದಲ್ಲಾದರೆ, ನಂತರ ‘ಮಯಾಚಂದ ದಿಗಂಬರ ಜೈನ ಮಾಧ್ಯಮಿಕ ಶಾಲೆ’ಗೆ ಸೇರಿಸಲಾಯಿತು. ಯಶವಂತ ಆರನೆಯ ವರ್ಗದಲ್ಲಿದ್ದಾಗ ತಾಯಿ ಮನೋರಮಾ ದೇವಿಯ ನಿಧನ ವಾಯಿತು. ಅನಾಥನಾದ ಯಶವಂತ ತಂದೆಯ ಆರೈಕೆಯಲ್ಲಿ ಬೆಳೆದನು. ತೋಳು ಬಲಿಯುತ್ತಿದ್ದಂತೆ ಶಿಕ್ಷಣದೊಂದಿಗೆ ತಂದೆಯ ಕಾರ್ಯದಲ್ಲಿ ಸಹಭಾಗಿಯಾಗುತ್ತಿದ್ದನು. ಮೇಲ್ನೋಟಕ್ಕೆ ಶಾಂತನಾಗಿರುತ್ತಿದ್ದರೂ ತಾಯಿಯ ವಿಯೋಗದಿಂದ ಬಾಲಕನ ಮನಸ್ಸಿನ ಮೇಲೆ ಬಹು ದೊಡ್ಡ ಆಘಾತವಾಗಿತ್ತು. ಆ ದುಃಖವನ್ನು ಮೌನದಲ್ಲಿಯೇ ನುಂಗುತ್ತಿದ್ದನು. ದಿನಗಳು ರೀತಿಯಾಗಿರುವುದಿಲ್ಲ. ಅವು ಬದಲಾದಂತೆ ಯಶವಂತನ ಜೀವನವೂ ಪರಿವರ್ತನೆ ಪಡೆದುಕೊಳ್ಳುತ್ತಿತ್ತು. ಬಾಲ್ಯದಲ್ಲಿ ಇವನಿಗೆ ಸುದೈವದಿಂದ ಸಾತ್ವಿಕ ಸ್ವಭಾವದ ಸ್ನೇಹಿತರು ದೊರೆತಿದ್ದರೂ. ತಂದೆ ತನ್ನ ಕಾರ್ಯದಲ್ಲಿ ನಿರತನಾಗಿದ್ದರೆ, ಈತ ತನ್ನ ಜಗತ್ತಿನಲ್ಲಿ ತಲ್ಲೀನನಾಗಿರುತ್ತಿರುತ್ತಿದ್ದನು.
೧೯೬೪ ರಲ್ಲಿ ಧರ್ಮಕ್ಷೇತ್ರಗಳ ದರ್ಶನಕ್ಕೆ ‘ಬಡವಾನಿ’ ಗೆ ಬಂದಾಗ ಅಲ್ಲಿ ಆಚಾರ್ಯ ಮಹಾವೀರಕೀರ್ತಿ ಹಾಗೂ ಆಚಾರ್ಯ ವಿಮಲಸಾಗರರ ಮಹಾರಾಜರ ದರ್ಶನ ಪಡೆಯುವ ಅವಕಾಶ ದೊರೆಯಿತು. ಬಹು ಸಮೀಪದಿಂದ ದೊರೆತ ಆಚಾರ್ಯದ್ವಯರ ಆಶೀರ್ವಾದದಿಂದ ಯಶವಂತನಿಗೆ ಅನಿರ್ವಚನೀಯ ಆನಂದಾನುಭೂತಿಯಾಗಿತ್ತು. ಯಶವಂತ ತೀರ್ಥಕ್ಷೇತ್ರಗಳ ದರ್ಶನ ಮಾಡಿ ಊರಿಗೆ ಹಿಂದಿರುಗಿದರೂ ಆ ಪ್ರಭಾವನೆಯಿಂದ ಮುಕ್ತನಾಗಿರಲಿಲ್ಲ. ಅವನ ಮನದ ಮೂಲೆಯೊಂದರಲ್ಲಿ ತ್ಯಾಗತ್ವ ಮನೆಮಾಡಿತ್ತು. ಮುಂದೆ ಕೆಲ ದಿನಗಳಲ್ಲಿ ಆಚಾರ್ಯದ್ವಯರು ಸಂಘದೊಂದಿಗೆ ವಿಹಾರ ಮಾಡುತ್ತ ‘ಸನಾವಾದ’ಕ್ಕೆ ಆಗಮಿಸಿದರು. ಜಿನಮುನಿಗಳ ಆಗಮನದ ಸುದ್ದಿ ಮುಟ್ಟುತ್ತಿದ್ದಂತೆ ಬಾಲಕನಲ್ಲಿ ಧರ್ಮ ಭಾವನೆ ಚಿಗುರೊಡೆಯಿತು. ದಿನದ ಹೆಚ್ಚಿನ ಅವಧಿಯನ್ನು ಅವರ ಸಾನ್ನಿಧ್ಯದಲ್ಲಿಯೆ ಕಳೆಯುತ್ತಿದ್ದನು. ತ್ಯಾಗಿಗಳ ದಿನಚರಿಯಿಂದ ಪ್ರಭಾವಿತನಾಗಿ, ತನ್ನಳತೆಗೆ ಸರಿ ಹೊಂದುವ ಶಾಸ್ತ್ರಗಳನ್ನು ಓದುವ ಅಭ್ಯಾಸ ರೂಢಿಸಿಕೊಂಡನು. ಧಾರ್ಮಿಕ ಕತೆಗಳಲ್ಲಿ ಬರುವ ಪಾತ್ರಗಳು ಇವನ ಮೇಲೆ ಪ್ರಭಾವ ಬೀರಿದವು.
೧೯೬೫ ರಲ್ಲಿ ಸಾದ್ವಿ ಇಂದುಮತಿ ಮಾತಾಜಿ, ಸುಪಾರ್ಶ್ವಮತಿ ಮಾತಾಜಿ ಮತ್ತು ವಿದ್ಯಾಮತಿ ಮಾತಾಜಿ ಯವರು ಸನಾವಾದ ದಲ್ಲಿ ಚಾತುರ್ಮಾಸ ಮಾಡಿದರು. ಇವರ ಸಾನ್ನಿಧ್ಯದಲ್ಲಿ ಯಶವಂತನಿಗೆ ಧರ್ಮ ರುಚಿಯ ಅನುಭೂತಿಯಾಗಿ ದಿನಕ್ಕೆ ಒಂದು ಸಲ ಭೋಜನ (ಏಕಭುಕ್ತಿ)ದ ನಿಯಮ ಧರಿಸಿದ ನು. ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಗ್ರಂಥಗಳ ಪರಿಚಯ ಮಾಡಿಕೊಂಡನು. ಮಾಧ್ಯಮಿಕ ಶಿಕ್ಷಣ ಮುಗಿಯುತ್ತಿದ್ದಂತೆ ಖಂಡವಾ’ ನಗರದ ಐ.ಟಿ.ಐ. ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡನು.ಅಲ್ಲಿಯ ಒಬ್ಬ ಧರ್ಮಾನುಯಾಯಿಯ ಸಹಾಯದಿಂದ ಕಾಲೇಜಿನ ಹಾಸ್ಟೇಲನಲ್ಲಿ ವಾಸ್ತವ್ಯದ ವ್ಯವಸ್ಥೆಯಾಯಿತು. ಒಂದು ದಿನ ಹಾಸ್ಟೆಲಿನ ಡಾಯರೆಕ್ಟರ ಇವನಿಗೆ ಮಾರ್ಕೆಟಿನಿಂದ ಮಾಂಸ ತರುವಂತೆ ಆದೇಶಿಸಿದನು. ಸರತಿಯಂತೆ ವಿದ್ಯಾರ್ಥಿಗಳು ಮಾರ್ಕೆಟಿನಿಂದ ವಸ್ತುಗಳನ್ನು ತರುವ ಕ್ರಮವಿತ್ತು. ಕಾರಣ ಯಶವಂತ ವ್ಯವಸ್ಥಾಪನ ಆದೇಶ ಪಾಲಿಸದಿದ್ದರೆ ಶಿಕ್ಷೆ ಅನುಭವಿಸಬೇಕಾಗಿತ್ತು. ಅದಕ್ಕೆ ಅವಕಾಶ ಕೊಡದೆ ಮರುದಿನ ಮುಂಜಾನೆ ಯಶವಂತ ಕಾಲೇಜು ಬಿಟ್ಟು ‘ಸನಾವಾದ’ಕ್ಕೆ ಬಂದನು. ಪೂರ್ವಾಪರ ವಿಚಾರ ಮಾಡಿ ‘ಬಡವಾಹ’ದ ಡಿಗ್ರಿ ಕಾಲೇಜಿಗೆ ಸೇರಿಕೊಂಡನು.
೧೯೬೯ ರಲ್ಲಿ ಚಾರಿತ್ರ ಚಕ್ರವರ್ತಿ ಆಚಾರ್ಯ ಶಾಂತಿಸಾಗರ ಮಹಾರಾಜರಿಂದ ದೀಕ್ಷಿತ ಶತಾಧಿಕ ಗ್ರಂಥಗಳ ಕರ್ತೃ, ಹಸ್ತಿನಾಪುರದ ಜಂಭೂದ್ವೀಪದ ಪಾವನ ಪ್ರೇರೆಪಿಕಾ, ಸಾದ್ವಿ ಗಣಿನಿ ಆರ್ಯಕಾ ರತ್ನ ಜ್ಞಾನಮತಿ ಮಾತಾಜಿಯವರು ನಾಲ್ಕು ಜನ ಆರ್ಯಿಕೆ ಹಾಗೂ ಇಬ್ಬರು ಕ್ಷುಲ್ಲಿಕೆಯರೊಂದಿಗೆ ‘ಸನಾವಾದ’ದಲ್ಲಿ ಚಾತುರ್ಮಾಸ ಮಾಡಿದರು. ಈ ಸಮಯದಲ್ಲಿ ಮಾತಾಜಿ ಯಶವಂತನ
ಮನೋಗತವನ್ನು ಅರಿತಿದ್ದರು. ಅವನಿಗೆ ಜಿನಧರ್ಮದ ಹಸಿವು ಹೆಚ್ಚಿಸುವುದರೊಂದಿಗೆ ‘ಮೋಟಕ್ಕಾ’ದ ಜಿನಾಲಯದಲ್ಲಿ ವೈರಾಗ್ಯದ ಬೀಜ ಮಂತ್ರವನ್ನು ದಯಪಾಲಿಸಿದ್ದರು. ವರ್ಷಾಯೋಗ ಮುಗಿದ ಮೇಲೆ ಜ್ಞಾನಮತಿ ಮಾತಾಜಿಯವರೊಂದಿಗೆ ವಿಹಾರ ಕೈಕೊಂಡು ಮುಕ್ತಾಗಿರಿ ಕ್ಷೇತ್ರದಲ್ಲಿ ಅವರಿಂದಲೇ ೫ ವರ್ಷದ ಬ್ರಹ್ಮಚರ್ಯ ವ್ರತ ಸ್ವೀಕರಿಸಿ, ತ್ಯಾಗಿ ಬದುಕಿನ ಪಥಿಕನಾದನು. ತದನಂತರ ೧೯೬೮ ರಲ್ಲಿ ‘ಬಾಗಿದೌರಾ ದಲ್ಲಿ ಆಚಾರ್ಯ ಶ್ರೀ ವಿಮಲಸಾಗರರಿಂದ ಮೋಕ್ಷ ಮಾರ್ಗದ ಪ್ರಥಮ ಸೋಪಾನ ಆಜೀವನ ಬ್ರಹ್ಮಚರ್ಯ – ವ್ರತ ಸ್ವೀಕರಿಸಿದ ನು. ಆಚಾರ್ಯ ಶಿವಸಾಗರರ ಸಂಘದಲ್ಲಿದ್ದ ಆರ್ಯಿಕಾ ಜ್ಞಾನಮತಿ ಮಾತಾಜಿಯವರ ಸಾನ್ನಿಧ್ಯದಲ್ಲಿ ಶಾಸ್ತ್ರಾಧ್ಯಯನದೊಂದಿಗೆ ಮುನಿಚರ್ಯ ವೈಯ್ಯಾವೃತ್ತಿ ಗಳನ್ನು ಬಹು ಸಮೀಪದಿಂದ ನೋಡಿ ತಿಳಿದುಕೊಂಡನು.
ಸಂಘ ಪ್ರತಾಪಗಡದ ಚಾತುರ್ಮಾಸ ಮುಗಿಸಿ ಮಹಾವೀರಜಿಯ ಶಾಂತಿವೀರ ನಗರದ ಪಂಚಕಲ್ಯಾಣಕ್ಕೆ ಬಂದಿತು. ಅಲ್ಲಿ ಸಂಘಸ್ಥ ಇತರ ತ್ಯಾಗಿಗಳೊಂದಿಗೆ ಬ್ರ. ಯಶವಂತನೂ ಆಚಾರ್ಯ ಶಿವಸಾಗರ ಮಹಾರಾಜರಲ್ಲಿ ಮುನಿ ದೀಕ್ಷೆಗಾಗಿ ಪ್ರಾಥಿಸಿದ ನು. ಅದಕ್ಕೆ ಆಚಾರ್ಯರು ಮೊದಲು ಸಿದ್ಧಕ್ಷೇತ್ರ ಶಿಖರಜಿಯ ಯಾತ್ರೆಗೆ ನಮ್ಮೊಂದಿಗೆ ಬಾ, ತದನಂತರ ನೋಡೋಣವೆಂದರು. ಮುನಿಗಳ ಆದೇಶದಂತೆ ಯಶವಂತ ಹಿಂದು ಮುಂದು ನೋಡದೆ ಮರುದಿನ ಶಿಖರಜಿ ಯಾತ್ರೆಗೆ ತೆರಳಿದನು. ವಿಚಿತ್ರವೆಂದರೆ ಅದೇ ದಿನ ಸಾಯಂಕಾಲ ಆಚಾರ್ಯ ಶ್ರೀ ಶಿವಸಾಗರರ ಆಕಸ್ಮಿಕವೆಂಬಂತೆ ಸಮಾಧಿ ಯಾಯಿತು. (೧೯೬೯ ಫೆಬ್ರುವರಿ ೧೬ ಸಾಯಂಕಾಲ ೩.೫೫ ಕ್ಕೆ ಸಮಾಧಿ) ಸಿಖರಜಿ ಯಾತ್ರೆಯಿಂದ ತಿರುಗಿ ಬಂದ ತರುವಾಯ ೧೯೬೯ ರ ಫೆಬ್ರುವರಿ ೨೪ ರಂದು ಮುನಿ ಧರ್ಮಸಾಗರರಿಗೆ ಆಚಾರ್ಯಪದ ಪ್ರಾಪ್ತ ವಾಗುತ್ತಿದ್ದಂತೆ ಅದೇ ದಿನ ಅವರ ಹಸ್ತದಿಂದ ಬ್ರ. ಯಶವಂತ ಸಹಿತ ೧೧ ಜನರಿಗೆ ದೀಕ್ಷೆ ಕೊಡಮಾಡಲಾಯಿತು. ಅವರಲ್ಲಿ ಎಲ್ಲರಿಗಿಂತ ಕಿರಿಯ ವಯಸ್ಸಿನ ಬ್ರ. ಯಶವಂತನಿಗೆ ಮುನಿ ದೀಕ್ಷೆ ಪ್ರದಾನ ಮಾಡಿ ಮುನಿಶ್ರೀ ವರ್ಧಮಾನಸಾಗರರೆಂದು ನಾಮಕರಣ ಮಾಡಲಾಯಿತು.
ಮುನಿಯಾದ ಪ್ರಾರಂಭದಲ್ಲಿ ಆಹಾರದ ಬದಲಾವಣೆಯಿಂದ ವರ್ಧಮಾನಸಾಗರರ ಶರೀರದಲ್ಲಿ ಅನಾರೋಗ್ಯ ತಲೆದೊರಿತು. ಅದು ದಿನದಿಂದ ದಿನಕ್ಕೆ ಹೆಚ್ಚಾಗಿ ಜೇಷ್ಟ ಶುಕ್ಲ ಪಂಚಮಿ ದಿನ ಖಾನಿಯಾಜಿಯಲ್ಲಿ ಅಶಕ್ತತೆಯಿಂದ ಪ್ರಜ್ಞಾಹೀನ ರಾದರು. ಪಕ್ಕೆಲುಬುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಿತು. ತಕ್ಷಣ ಎರಡೂ ಕಣ್ಣುಗಳು ಕಾಣದಂತಾದವು. ಡಾಕ್ಟರರು ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಅದಕ್ಕೆ ಆಚಾರ್ಯ ಧರ್ಮಸಾಗರರು ಸಮ್ಮತಿ ಸೂಚಿಸದೆ, ಬಂದ ಪರೀಷಹಗಳನ್ನು ಎದುರಿಸಲೇಬೇಕೆಂದು ಆದೇಶ ನೀಡಿದರು. ಅದರಂತೆ ಚಂದ್ರಪ್ರಭು ಭಗವಾನರ ಸಮಕ್ಷಮ ೨೪ ಗಂಟೆಯ ನಿಯಮ ತೆಗೆದುಕೊಂಡು ಉಚ್ಚಸ್ವರದಿಂದ ಭಕ್ತಿಪಾಠ ಹೇಳತೊಡಗಿದರು. ಸುಮಾರು ಮೂರು ತಾಸಿನ ಭಕ್ತಾಮರ ಮುಗಿಯುತ್ತಿದ್ದಂತೆ ೫೨ ತಾಸಿನಿಂದ ಕುರುಡಾಗಿದ್ದ ಕಣ್ಣುಗಳಲ್ಲಿ ಪ್ರಕಾಶ ಕಾಣತೊಡಗಿತು. ಇದರಿಂದ ಹರ್ಷಿತರಾದ ತ್ಯಾಗಿವೃಂದ ಅಹೋರಾತ್ರಿ ಹಾಗೂ ಮರುದಿನ ಸಾಯಂಕಾಲ ೫ ಗಂಟೆಯವರೆಗೆ ಭಕ್ತಿಪಾಠ ಪಠಣ ಹೇಳಿದರು. ಇದರಲ್ಲಿ ೪೭ ಜನ ಸಾಧು-ಸಾದ್ವಿಗಳು ನೂರಾರು ಶ್ರಾವಕರು ಕೂಡಿಕೊಂಡಿದ್ದರು. ಎರಡನೆ ದಿನ ಸಾಯಂಕಾಲದ ಹೊತ್ತಿಗೆ ಮುನಿ ವರ್ಧಮಾನ ಸಾಗರರು ತಮಗೊದಗಿಬಂದ ಸಂಕಟದಿಂದ ಮುಕ್ತರಾದರು.
ವರ್ಧಮಾನ ಸಾಗರರು ವಿದ್ಯಾಗುರು ಆಚಾರ್ಯಕಲ್ಪ ಶ್ರೀ ಶ್ರುತಸಾಗರರ ಸಾನ್ನಿಧ್ಯದಲ್ಲಿ ಆಗಮ ಗ್ರಂಥಗಳ ಅಧ್ಯಯನ ಮಾಡಿದರು. ಭಗವಾನ ಮಹಾವೀರರ ನಿರ್ವಾಣ ಮಹೋತ್ಸವದ ಕಾರ್ಯಕ್ರಮಕ್ಕೆ ಆಚಾರ್ಯ ಧರ್ಮಸಾಗರರೊಂದಿಗೆ ದಿಲ್ಲಿ ಗೆ ಹೋದರು. ಅಲ್ಲಿ ಅವರಿಗೆ ಭಾರತ ಗೌರವ ಆಚಾರ್ಯಶ್ರೀ ದೇಶಭೂಷಣರು ಹಾಗೂ ಏಲಾಚಾರ್ಯ ಮುನಿಶ್ರೀ ವಿದ್ಯಾನಂದರ ನ್ನು ಸಂದರ್ಶಿಸುವ ಅವಕಾಶ ಕೊರೆಯಿತು. ೧೯೮೫ ರಲ್ಲಿ ‘ಲುಣವಾ ದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಯುವ ಸಮ್ಮೇಳನ ದಲ್ಲಿ ವರ್ಧಮಾನ ಸಾಗರರು ತಮ್ಮ ಪಾಂಡಿತ್ಯ ಪೂರ್ಣ ಉಪದೇಶದಿಂದ ಯುವ ಜನಾಂಗದ ಹೃದಯ ಗೆದ್ದಿದ್ದ ರು. ವರ್ತಮಾನದ ಧರ್ಮ ಪ್ರಭಾವನೆಯಲ್ಲಿ ಯುವಕರ ಪಾತ್ರ ಕುರಿತು ವಿವೇಚಿ ಸಿದ್ದರು.
ಆಚಾರ್ಯ ಧರ್ಮಸಾಗರರು ಸಮಾಧಿ ಸಾಧಿಸಿದ ತರುವಾಯ ವರ್ಧಮಾನಸಾಗರರು ಭೀಂಡರ ದಲ್ಲಿದ್ದ ಆಚಾರ್ಯ ಅಜಿತಸಾಗರ ರ ಸಾನ್ನಿಧ್ಯದಲ್ಲಿದ್ದು, ಜಿನ ಧರ್ಮದ ಗೂಢ ರಹಸ್ಯಗಳನ್ನೊಳಗೊಂಡಂತೆ ಹಲವು ಜ್ಞಾನಗಳನ್ನು ಆಚಾರ್ಯರಿಂದ ಪಡೆದುಕೊಂಡರು. ಆಚಾರ್ಯ ಅಜಿತಸಾಗರರು ಶಿಷ್ಯನ ಕ್ಷಮತಾ ಶಕ್ತಿಯನ್ನು ಗಮನಿಸಿಯೇ ತಮ್ಮ ನಂತರ ಸಂಘ ಸಂಚಾಲನೆಯ ದೃಷ್ಟಿಯಂದ ವರ್ಧಮಾನ ಸಾಗರರಿಗೆ ಆಚಾರ್ಯ ಪದ ಕೊಡಮಾಡಬೇಕೆಂದು ಪತ್ರ ಬರೆದಿಟ್ಟಿದ್ದ ರು. ಅವರ ಆದೇಶದನ್ವಯ ೨೪ ಜೂನ ೧೯೯೦ ಆಷಾಢ ಶುಕ್ಲ ದ್ವಿತೀಯಾ ದಂದು ರಾಜಸ್ಥಾನದ ‘ಪಾರಸೋಲಾ’ ನಗರದಲ್ಲಿ ಆಚಾರ್ಯ ಪುಷ್ಪದಂತಸಾಗರರ ಸಸಂಘದ ಉಪಸ್ಥಿತಿಯಲ್ಲಿ ಮುನಿಶ್ರೀ ವರ್ಧಮಾನಸಾಗರ ರಿಗೆ ಆಚಾರ್ಯ ಪದ ದಿಂದ ಪುರಸ್ಕರಿಸಲಾಯಿತು. ಪ್ರಸ್ತುತ ಸಮಾರಂಭದಲ್ಲಿ ಆಚಾರ್ಯ ವಿದ್ಯಾನಂದರು ಪಿಂಚಿಯೊಂದನ್ನು ಕಳಿಸಿಕೊಟ್ಟಿದ್ದರು. ಆಚಾರ್ಯ ಪದ ಗ್ರಹಣ ಮಾಡಿದ ನಂತರದ ಪ್ರಥಮ ಚಾತುರ್ಮಾಸ ವನ್ನು ಪಾರಸೋಲಾ’ ದಲ್ಲಿಯೇ ಆಚರಿಸಲಾಯಿತು. ಅಲ್ಲಿಂದ ವಿಹಾರ ಮಾಡುತ್ತಾ ಅತಿಶಯ ಕ್ಷೇತ್ರ ‘ಅಡಿಂದಾ’ ಪಾರ್ಶ್ವನಾಥದಲ್ಲಿ ಎರಡನೆಯ ವರ್ಷಾಯೋಗ ಆಚರಿಸಿದರು. ಅವಧಿ ಮುಗಿದ ತರುವಾಯ ಸಂಘ ಉದಯಪುರ ಕ್ಕೆ ಆಗಮಿಸಿತು. ಅಲ್ಲಿಯ ನಿರ್ಮಲಕುಮಾರ ಶೇಠಿ ಎಂಬವರು, ಆಚಾರ್ಯ ವರ್ಧಮಾನ ಸಾಗರರ ಸಂಘದೊಂದಿಗೆ ಗಿರನಾರ ಹಾಗೂ ಗುಜರಾತದ ಸಿದ್ಧಕ್ಷೇತ್ರಗಳ ದರ್ಶನ ಮಾಡುವ ಮನೋಗತ ವ್ಯಕ್ತಪಡಿಸಿದ ರು. ಅನುಮತಿ ದೊರೆಯುತ್ತಿದ್ದಂತೆ, ವಿಹಾರ ಕೈಕೊಂಡು ಗುಜರಾತ ಪ್ರಾಂಥದ ಸಣ್ಣ ಪುಟ್ಟ ಗ್ರಾಮ ನಗರಗಳಲ್ಲಿ ಧರ್ಮ ಪ್ರಭಾವನೆ ಮಾಡುತ್ತ ಕ್ಷೇತ್ರದರ್ಶನ ಮಾಡಿ ‘ತಾರಂಗಾ’ದಲ್ಲಿ ವರ್ಧಮಾನ ಸಾಗರರು ಸಂಘ ಸಹಿತ ಚಾತುರ್ಮಾಸ ಮಾಡಿದರು.
ತಾರಂಗಾ’ ಚಾತುರ್ಮಾಸ ಮುಗಿಸಿ ಸಂಘ ವಿಜಯಪುರಕ್ಕೆ ಬರುತ್ತಿರುವಂತೆ ಶ್ರವಣಬೆಳಗೊಳದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕರು ೧೯೯೩ರ ಭಗವಾನ ಬಾಹುಬಲಿಯ ಮಸ್ತಕಾಭಿಷೇಕಕ್ಕೆ ಆಹ್ವಾನಕೋರಿ ಶ್ರೀ ನಿರ್ಮಲಕುಮಾರ ಹಾಗೂ ಶ್ರೀ ನೀರಜ ಜೈನರ ಮುಖಾಂತರ ಸಂದೇಶ ಕಳಿಸಿದ್ದರು. ಅದರನ್ವಯ ಆಚಾರ್ಯ ವರ್ಧಮಾನ ಸಾಗರರು ಸಂಘಸಹಿತ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿಯ ಕ್ಷೇತ್ರಗಳ ದರ್ಶನ ಮಾಡುತ್ತ ಕರ್ನಾಟಕಕ್ಕೆ ಆಗಮಿಸಿದರು. ಸುಮಾರು ೮೦ ಕ್ಕೂ ಅಧಿಕ ಸಾಧು-ಸಾದ್ವಿಗಳಿಂದ ಕೂಡಿದ ಹಿರಿಯ ಸಂಘದೊಂದಿಗೆ ವರ್ಧಮಾನಸಾಗರರು ಮಸ್ತಕಾಭಿಷೇಕದ ಪ್ರಧಾನಾಚಾರ್ಯರ ರೂಪದಲ್ಲಿ ವೈಭವದಿಂದ ಶ್ರವಣಬೆಳಗೊಳದ ಗೊಮ್ಮಟನಿಗೆ ಮಹಾಮಜ್ಜನ ಸಂಪನ್ನ ಗೊಳಿಸಿದರು. ಅಲ್ಲಿಂದ ಮೈಸೂರು, ಹಾಸನ, ಸಾಲೀಗ್ರಾಮ, ಕನಕಗಿರಿ ಕ್ಷೇತ್ರಗಳ ವಿಹಾರ ಮಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಅಹ್ವಾನದ ಮೇರೆಗೆ ಧರ್ಮಸ್ಥಳದಲ್ಲಿ ಪಂಚಕಲ್ಯಾಣ ಹಾಗೂ ಭಗವಾನ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವಗಳ ಆಯೋಜನೆಯಲ್ಲಿ ಪಾಲ್ಗೊಂಡು ಸಂಪನ್ನ ಗೊಳಿಸಿದರು.
ಧರ್ಮಸ್ಥಳದಿಂದ ವಿಹಾರ ಕೈಕೊಂಡು ಮಾರ್ಗ ಮಧ್ಯದ ಗ್ರಾಮನಗರ ಪ್ರದೇಶಗಳಲ್ಲಿ ಧರ್ಮ ಪ್ರಭಾವನೆ ಮಾಡುತ್ತ, ಚಾರಿತ್ರ ಚಕ್ರವರ್ತಿಗಳ ಜನ್ಮಸ್ಥಳ ಭೋಜ ಗ್ರಾಮಸ್ಥರ ಆಗ್ರಹದ ಮೇರೆಗೆ ಮಹಾ ಗುರುವಿನ ಜನ್ಮಭೂಮಿಗೆ ಆಗಮಿಸಿದರು. ಆ ಪ್ರದೇಶದಲ್ಲಿ ಆಗಿ ಹೋದ ಬಹುತೇಕ ಮಹಾರಾಜರ ಜನ್ಮಭೂಮಿಯಲ್ಲಿ ವಿಹಾರ ಮಾಡುತ್ತ ಕುಂಭೋಜ ಬಾಹುಬಲಿಯಲ್ಲಿ ಚಾತುರ್ಮಾಸ ಮಾಡಿದರು. ಅವಧಿ ಸಂಪನ್ನವಾಗುತ್ತಿದ್ದಂತೆ ಉತ್ತರದ ಕಡೆಗೆ ವಿಹಾರ ಕೈಕೊಂಡು ಉದಯಪುರದ ಪಂಚಕಲ್ಯಾಣಕ್ಕೆ ಆಗಮಿಸಿದರು. ಆ ಪ್ರದೇಶದಲ್ಲಿ ಧಾರ್ಮಿಕ ಶಿಬಿರ, ಸಂಸ್ಕಾರ ಶಿಬಿರ, ವಿದ್ವತ್ ಸಂಗೋಷ್ಠಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತ ಧರ್ಮ ಪ್ರಭಾವನೆ ಮಾಡಿದರು. ಈಗವರು ಭರತವರ್ಷ ಗೌರವಿಸುವ ಸಂತರಾಗಿದ್ದರು.
೨೦೦೪ ರಲ್ಲಿ ರಾಜಸ್ಥಾನದ ‘ಸಲುಂಬರ ದಲ್ಲಿದ್ದಾಗ ೨೦೦೬ ರ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕಕಕ್ಕೆ ಆಮಂತ್ರಣ ಬಂದುದರಿಂದ ೪ ಡಿಸೆಂಬರ ೨೦೦೪ ರಂದು ಶ್ರವಣ ಬೆಳಗೊಳದ ಕಡೆಗೆ ಪ್ರಯಾಣ ಬೆಳೆಸಿದರು. ೭ ತಿಂಗಳು ಸುದೀರ್ಘ ವಿಹಾರ ಮಾಡಿ ೨೦೦೫ ಜುಲೈನಲ್ಲಿ ಶ್ರವಣಬೆಳಗೊಳ ಕ್ಕೆ ಬಂದರು. ಆಚಾರ್ಯ ವರ್ಧಮಾನ ಸಾಗರರ ಪ್ರಾಧಾನ್ಯತೆಯಲ್ಲಿ ಉಪಸ್ಥಿತ ಸುಮಾರು ೨೫೦ ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಶ್ರಮಣ ಸಂತರ ಸಮಕ್ಷಮದಲ್ಲಿ ೨೦೦೬ ರ ಮಹಾಮಜ್ಜನ ಸಂಪನ್ನ ವಾಯಿತು. ಶ್ರವಣಬೆಳಗೊಳದಿಂದ ಸಂಘ ತಮಿಳುನಾಡಿನ ಕಡೆಗೆ ವಿಹಾರ ಬೆಳೆಸಿತು. ಮಾರ್ಗಮಧ್ಯದಲ್ಲಿ ಮಹಾನಗರ ಬೆಂಗಳೂರಿನಲ್ಲಿ ಒಂದು ತಿಂಗಳಿದ್ದು ಎರಡು ಪಂಚಕಲ್ಯಾಣಕಗಳ ನೇತೃತ್ವ ವಹಿಸಿ ಅವನ್ನು ಯಶಸ್ವಿಯಾಗಿ ಸಂಪನ್ನ ಗೊಳಿಸಿದರು. ಅನೇಕ ದಿನಗಳ ಪ್ರಯಾಣದಿಂದ ಸಂಘ ತಮಿಳುನಾಡಿ ಗೆ ತಲುಪಿತು. ಅಲ್ಲಿ ಆಚಾರ್ಯ ಕುಂದಕುಂದರ ತಪೋಭೂಮಿ ‘ಪೊನ್ನೂರು ಮಲೈ’ದಲ್ಲಿ ಸಂಘ ೨೦೦೬ ರ ಚಾತುರ್ಮಾಸ ಆಚರಿಸಿತು. ಅವಧಿ ಮುಗಿಯುತ್ತಿದ್ದಂತೆ ಪಾಂಡಿಚೇರಿಯ ಪಂಚಕಲ್ಯಾಣ ಮಹೋತ್ಸವವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿ, ತಿರುಗಿ ಧರ್ಮಸ್ಥಳದ ಕಡೆಗೆ ವಿಹಾರ ಕೈಕೊಂಡರು. ಅಲ್ಲಿ ವೀರೇಂದ್ರ ಹೆಗ್ಗಡೆಯವರ ನೇತೃತ್ವ ದಲ್ಲಿ ಆಯೋಜಿಸಲಾದ ಧರ್ಮಸ್ಥಳದ ಬಾಹುಬಲಿಯ ೧೨ ವರ್ಷದ ೨ನೇ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ಸಂಪನ್ನ ಗೊಳಿಸಿ ಮೂಡುಬಿದಿರೆಯ ಕ್ಷೇತ್ರಗಳ ದರ್ಶನ ಮಾಡಿ ಕನಕಗಿರಿಯಲ್ಲಿ ಹಮ್ಮಿಕೊಂಡ ಪಂಚಕಲ್ಯಾಣಕ್ಕೆ ಆಗಮಿಸಿದರು. ಅಲ್ಲಿಂದ ಶ್ರವಣಬೆಳಗೊಳಕ್ಕೆ ಬಂದು ಅಲ್ಲಿ ೨೦೦೭ ರ ಚಾತುರ್ಮಾಸ ಮಾಡಿದರು.
ಇವರೊಂದಿಗೆ ಆಚಾರ್ಯ ದೇವನಂದಿ ‘ಗಳ ಸಂಘವೂ ವರ್ಷಾಯೋಗದಲ್ಲಿತ್ತು. ಚಾತುರ್ಮಾಸದ ಅವಧಿ ಮುಗಿಯುತ್ತಿದ್ದಂತೆ *ಆಚಾರ್ಯ ವರ್ಧಮಾನ ಸಾಗರರು ಸಂಘ ಸಹಿತ ಸಮ್ಮೇದಗಿರಿಯ ದರ್ಶನಾರ್ಥವಾಗಿ ಮಂಗಲ ವಿಹಾರ ಕೈಕೊಂಡಿತು.
ಕರ್ನಾಟಕ ಮಹಾರಾಷ್ಟ್ರ ಗಡಿಭಾಗಗಳ ಗ್ರಾಮ ನಗರಗಳಲ್ಲಿ ಧರ್ಮ ಪ್ರಭಾವನೆ ಮಾಡುತ್ತ ಇನ್ನು ಐನಾಪುರಕ್ಕೆ ಬಂದು ಆಚಾರ್ಯ ಶಾಂತಿಸಾಗರರ ಪರಮ ಶಿಷ್ಯ ಆಚಾರ್ಯ ಕುಂಥುಸಾಗರರ[ಐನಾಪುರ] ಸ್ಮಾರಕದಲ್ಲಿ ಅವರ ಚರಣ ಪಾದುಕೆ ಸ್ಥಾಪನಾ ಕಾರ್ಯ ಸಂಪನ್ನಗೊಳಿಸಿ ವಿಜಯಪುರಕ್ಕೆ ಸಸಂಘ ಆಗಮಿಸಿದರು. ಇಲ್ಲಿ ಭೂಗರ್ಭದಲ್ಲಿ ದೊರೆತ ಭಗವಾನ ಮಹಾವೀರರ ಪುರಾತನ ಮೂರ್ತಿಯ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಮುಗಿಸಿ, ಕುಂಥಲಗಿರಿಯ ಕಡೆಗೆ ಸಂಘ ವಿಹಾರ ಕೈಕೊಂಡಿತು. ಅಲ್ಲಿಯ ಕ್ಷೇತ್ರ ಕಮೀಟಿ ಆಚಾರ್ಯ ವರ್ಧಮಾನಸಾಗರರ ಮಾರ್ಗದರ್ಶನದಲ್ಲಿ *೨೦ ನೆಯ ಶತಮಾನದ ಪ್ರಥಮಾಚಾರ್ಯ ಚಾರಿತ್ರ ಚಕ್ರವರ್ತಿ ಶ್ರೀ ಶಾಂತಿಸಾಗರ ಮಹಾರಾಜರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು. ಮಹಾರಾಷ್ಟ್ರದ ಬಹುತೇಕ ನಗರ ಪ್ರದೇಶಗಳಲ್ಲಿ ಧರ್ಮ ಪ್ರಭಾವನೆ ಮಾಡುತ್ತ ಆಚಾರ್ಯರು ಸಂಘ ಸಹಿತ ನಾಗಪುರಕ್ಕೆ ಬಂದು, ಅಲ್ಲಿ ಪಂಚಕಲ್ಯಾಣ ಮಹೋತ್ಸವ ಯಶಸ್ವಿಗೊಳಿಸಿದರು. ಅಲ್ಲಿಂದ ರಾಮಟೇಕ ಕ್ಷೇತ್ರದ ದರ್ಶನ ಪಡೆದು ಸಂಘ ಛತ್ತೀಸಗಡ ಪ್ರಾಂತವನ್ನು ಪ್ರವೇಶಿಸಿತು. ಅಲ್ಲಿಂದ ರಾಯಪುರ ಮಾರ್ಗವಾಗಿ ಸಮ್ಮೇದಗಿರಿಗೆ ಸಂಘ ವಿಹಾರ ಮಾಡಿತು. ಹಜಾರಿಬಾಗ, ಈಸರಿ ಮಾರ್ಗವಾಗಿ ೪ ಜುಲೈ ೨೦೦೭ ರ ಮುಂಜಾನೆ ಸಿದ್ಧಕ್ಷೇತ್ರದ ಮಧುವನ ಪ್ರವೇಶಿಸಿತು.
ಸು. ೩೦೦೦ ಕೀ.ಮೀ.ದ ಯಾತ್ರೆ ೨೨೯ ದಿನಗಳಲ್ಲಿ ಪೂರ್ತಿ ಯಾಗಿತ್ತು.
ಸಂಘ ೨೦೦೮ ಚಾತುರ್ಮಾಸವನ್ನು ತೀರ್ಥರಾಜ ಸಮ್ಮೇದ ಶಿಖರಜಿಯಲ್ಲಿ ಸಂಪನ್ನ ಗೊಳಿಸಿತು. ವರ್ಧಮಾನಸಾಗರರು ಆಚಾರ್ಯಪದ ಸ್ವೀಕರಿಸಿದ ತರುವಾಯದ ೧೯ನೇ ಚಾತುರ್ಮಾಸವನ್ನು ೨೦೦೯ ರ ಮಹಾವೀರ ಜನ್ಮಕಲ್ಯಾಣಕವನ್ನು ‘ಬಾಗಾಪುರ’ ದಲ್ಲಿ ಪೂರೈಸಿಕೊಂಡು ಚಂಪಾಪುರ ಸಿದ್ಧಕ್ಷೇತ್ರದಲ್ಲಿ ವರ್ಷಾಯೋಗ ಆಚರಿಸಿತು. ಈ ಅವಧಿಯಲ್ಲಿ ಆಚಾರ್ಯ ವರ್ಧಮಾನ ಸಾಗರರು ವೀಸಪಂಥಿ ಹಾಗೂ ತೇರಾಪಂಥಿಗಳಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವುದರೊಂದಿಗೆ ಎರಡೂ ಪರಂಪರೆಗೆ ಸೇರಿದ ಮಂದಿರಗಳ ಜೀರ್ಣೋದ್ಧಾರದ ಕಾರ್ಯ ಮಾಡಿಸಿದರು. ಇಲ್ಲಿ ಈ ಮಾಡಿದ ಪ್ರಭಾವನೆಯನ್ನು ಶ್ರಾವಕರು ಬಹುದಿನಗಳವರೆಗೆ ಮರೆಯಲಾರರು. ಇಲ್ಲಿಂದ ಸಂಘ ಈ ಮಂಗಲ ವಿಹಾರ ಮಾಡುತ್ತ ಗುಣಾವಾ, ಪಾವಾಪುರಿ, ಕುಂಡಲಪುರ (ಬಡೇಬಾಬಾ) ಹಾಗೂ ರಾಜಗೃಹ ಕ್ಷೇತ್ರಗಳ ದರ್ಶನ ಪಡೆಯುತ್ತ ‘ಗಯಾ’ ನಗರಕ್ಕೆ ಆಗಮಿಸಿತು. ಚಳಿಗಾಲದ ಎರಡು ಈ ತಿಂಗಳು ಗಯಾ’ದಲ್ಲಿದ್ದು, ಸಂಘಸ್ಥ ‘ಮುನಿ ದೇವೇಶಸಾಗರ’ರ ಸಲ್ಲೇಖನಾ ಸಾಧನಾ ಮಹೋತ್ಸವ ಈ ಮುಗಿಸಿ, ಬಿಹಾರ ಪ್ರಾಂತದ ಕ್ಷೇತ್ರಗಳ ದರ್ಶನ ಮಾಡುತ್ತ ೩ ಮಾರ್ಚ ೨೦೧೦ ರಲ್ಲಿ ಕೊಲ್ಕತ್ತಾದ ಕಡೆಗೆ ಆಚಾರ್ಯರು ಸಂಘದೊಂದಿಗೆ ವಿಹಾರ ಮಾಡಿದರು. ಪ್ರಸ್ತುತ ವರ್ಷದ ಚಾತುರ್ಮಾಸ ಬೆಲಗಚ್ಛದ ಭ. ಪಾರ್ಶ್ವನಾಥ ದಿಗಂಬರ ಜೈನ ಉಪವನ ಮಂದಿರ ದಲ್ಲಿ ವಿಶೇಷ ಧರ್ಮ ಈ ಪ್ರಭಾವನೆಯೊಂದಿಗೆ ಸಂಪನ್ನಗೊಂಡಿತು. ಕೊಲ್ಕತ್ತಾದ ಈ ಐತಿಹಾಸಿಕ ಚಾತುರ್ಮಾಸದ ಅವಧಿಯಲ್ಲಿ ಶೈಕ್ಷಣಿಕ ಶಿಬಿರ , ೯ ಜನರಿಗೆ ಮುನಿ ದೀಕ್ಷೆ , ಮುನಿ ಶ್ರೀ ಯಶಸ್ವಿ ಸಾಗರ ಮಹಾರಾಜರ ಸಮಾಧಿ ನಿಧನ ಹಾಗೂ ಹಾಡವಾ ಮಂದಿರದ ಪಂಚ ಕಲ್ಯಾಣ ಮಹೋತ್ಸವ ಯಶಸ್ವಿಯಾಗಿ ಪ್ರಭಾವನಾತ್ಮಕವಾಗಿ ಸಂಪನ್ನಗೊಂಡವು.
ಆಚಾರ್ಯ ಶ್ರೀ ವರ್ಧಮಾನಸಾಗರರು ಸಂಘಸಹಿತ ಕಲಕತ್ತಾದಿಂದ ಸಮ್ಮೇದ ಶಿಖರಜಿಗೆ ಬಂದು ಅಲ್ಲಿ೨೦೧೧ ರ ವರ್ಷಾಯೋಗ ಆಚರಿಸಿದರು. ಅಲ್ಲಿಂದ ಬುಂದೇಲಖಂಡದೆಡೆಗೆ ವಿಹಾರ ಮಾಡಿದರು. ಆಹಾರಜಿ’ಯ ಶಾಂತಿ-ಕುಂಥು-ಅರಹನಾಥರ ಸನ್ನಿಧಿಯಲ್ಲಿ ೨೦೧೨ರ ವರ್ಷಾಯೋಗ ಮಾಡಿದರು. ಇಲ್ಲಿಂದ ನವಾಗಡ, ಫಲಹೋಡಿ, ಬಢಾಗಾಂವ, ಭಗವಾ , ದ್ರೋಣಾಗಿರಿ, ಶಾಹಗಡ, ನೈನಾಗಿರಿ ಕ್ಷೇತ್ರಗಳ ದರ್ಶನ ಪಡೆಯುತ್ತ ಕುಂಡಲಪುರದ ಬಡೆಬಾಬಾನ ಯತ್ತಿದ್ದ ತ್ಯಾಗಿಗಳ ಸನ್ನಿಧಿಗೆ ಬಂದು ಅಲ್ಲಿ ೨೦೧೩ರ ಚಾತುರ್ಮಾಸ ವನ್ನು ಆಚರಿಸಲಾಯಿತು. ಪ್ರಸ್ತುತ ವರ್ಷಾಯೋಗದ ಸಮಯದಲ್ಲಿ ‘ಮದನಗಂಜ-ಕಿಶನಗಡ’ ಅಜಮೇರ ಪರಿಸರದ ೧೦೦೮ ಜನ ಗುರು ಭಕ್ತರು ತಮ್ಮಲ್ಲಿ ೨೦೧೪ ರ ಚಾತುರ್ಮಾಸ ಮಾಡಬೇಕೆಂದು ವಿನಂತಿಪೂರ್ವಕ ಕಾಯಿ ಸಮರ್ಪಿಸಿದರು. ಅವರುಗಳ ವಿನಂತಿಗೆ ಸಮ್ಮತಿಸಿದ ಆಚಾರ್ಯರು ಸೋನಾಗಿರಿ ಗ್ವಾಲಿಯರ, ಆಗ್ರಾ, ಮಥುರಾ, ತಿಜಾರಾ ಕ್ಷೇತ್ರಗಳ ದರ್ಶನ ಪಡೆಯುತ್ತ ಕುಂದಕುಂದ ಭಾರತಿ ದಿಲ್ಲಿಯಲ್ಲಿದ್ದ ಆಚಾರ್ಯ ವಿದ್ಯಾನಂದರ ದರ್ಶನಕ್ಕೆ ಆಗಮಿಸಿದರು. ಅಲ್ಲಿ ೨೦೧೪ರ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವವನ್ನು ಸಂಪನ್ನಗೊಳಿಸಲಾಯಿತು. ಅಲ್ಲಿಂದ ಶ್ಯಾಮನಗರ, ಜಯಪುರದ ಆದಿನಾಥ ಮಂದಿರದ ಪಂಚಕಲ್ಯಾಣ ಮುಗಿಸಿ ಮದನಗಂಜ-ಕಿಶನಗಡಕ್ಕೆ ಆಗಮಿಸಿದರು.
ಆಚಾರ್ಯ ಶ್ರೀ ವರ್ಧಮಾನಸಾಗರರು ಕರ್ನಾಟಕದಲ್ಲಿ ನಾಲ್ಕು ಚಾತುರ್ಮಾಸಗಳನ್ನು ಮಾಡಿದ್ದು, ಎಲ್ಲವೂ ಶ್ರವಣಬೆಳಗೊಳದಲ್ಲಿಯೆ ಆಚರಿಸಿರುವುದುಂಟು. ತೀರ ಇತ್ತೀಚೆಗೆ ೨೦೧೮ರ ಫೆಬ್ರುವರಿಯಲ್ಲಿ ನಡೆದ ಭಗವಾನ ಬಾಹುಬಲಿಯ ಮಹಾಮಸ್ತಕಾಭಿಷೇಕದ ಪ್ರಧಾನ ಆಚಾರ್ಯರಾಗಿದ್ದು, ೫೦೦ ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಮುನಿಗಳ ಉಪಸ್ಥಿತಿಯಲ್ಲಿ ಮಹೋತ್ಸವವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದರು. ಇದುವರೆಗಿನ ತಮ್ಮ ಮುನಿ ಜೀವನದಲ್ಲಿ
೧೮ ಮುನಿಗಳು
೧೭ ಆರ್ಯಿಕಾ
ಒಬ್ಬರು ಐಲಕ
೧೦ ಕ್ಷುಲ್ಲಕ
೯ ಕ್ಷುಲ್ಲಿಕಾ
ದೀಕ್ಷೆಗಳನ್ನು ಭವ್ಯ ಜೀವಿಗಳಿಗೆ ಪ್ರಧಾನ ಮಾಡಿದ್ದಾರೆ. ವರ್ಧಮಾನ ಸಾಗರರು ತಮ್ಮ ಮುನಿ ಅವಸ್ಥೆಯಲ್ಲಿ ಒಟ್ಟು ೪೯ ಚಾತುರ್ಮಾಸ ಗಳನ್ನು ಇದುವರೆಗೆ ಆಚರಿಸಿದ್ದಾರೆ. ಅವುಗಳಲ್ಲಿ ೨೧ ಮುನಿಯಾಗಿ ಆಚರಿಸಿದರೆ, ಇನ್ನುಳಿದ ೨೮ ಆಚಾರ್ಯರಾಗಿ ಆಚರಿಸಿರುವುದುಂಟು. ಈ ಚಾತುರ್ಮಾಸಗಳು ಭಾರತ ದೇಶದ ಎಲ್ಲ ಭಾಗಗಳಲ್ಲಿ ಹಮ್ಮಿಕೊಂಡಿದ್ದಾರೆ. ಶಾಂತ ಸ್ವಭಾವದ ಚಿಂತನಶೀಲ ಪ್ರವೃತ್ತಿಯ ಆಚಾರ್ಯರು ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಸೇವೆ ಸಲ್ಲಿಸಿದ್ದಾರೆ. ಇವರಿಂದ ಆಚಾರ್ಯ ಶಾಂತಿಸಾಗರರ ಪರಂಪರೆ ಗೌರವಯುತವಾಗಿ ಮುಂದುವರೆದಿರುವುದು.
ಶಾಸ್ತ್ರ ಆಧಾರ
ಪ್ರೊ.ಬಿ.ಪಿ.ನ್ಯಾಮಗೌಡ
SARVARTHASIDDHI
GRANTHAMALE
PRASHANT.J.UPADHYE(GALATAGA)


