Friday, October 24, 2025
spot_img

ಜೈನ ಸುದ್ದಿಗಳು & ಇತಿಹಾಸ | JAIN NEWS & HISTORY

ಜೈನ ಸುದ್ದಿಗಳು & ಇತಿಹಾಸ
JAIN NEWS & HISTORY
🕉️🌷🙏🙏🙏🙏🙏🌷🕉️

ಪ. ಪೂ ೧೦೮
ಶ್ರೀ ಮಹಾಬಲ ಮುನಿಗಳು
🕉️🌷🙏🙏🙏🙏🙏🌷🕉️

ಇಂದು ಪ ಪೂಜ್ಯ ೧೦೮ ಮಹಾಬಲ ಮುನಿ ಮಹಾರಾಜರ ೨೮ ನೆಯ ಸಮಾಧಿ ದಿವಸ
ಮುನಿಗಳ ಪಾದಾರವಿಂದಗಳಲ್ಲಿ ತ್ರಿವಾರ ನಮೋಸ್ತು
ಭಾವಪೂರ್ಣ ವಿನಯಾಂಜಲಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮವು ಕೃಷ್ಣಾ ನದಿಯ ತೀರದಲ್ಲಿದೆ, ಜೈನ ಸಮಾಜವೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ದುರ್ಗಣ್ಣವರ ಮನೆತನ ಧರ್ಮ ಪಾರಾಯಣ ಮನೆತನವೆಂದು ಕರೆಸಿಕೊಂಡಿತ್ತು. ಈ ಮನೆತನದ ತಂದೆ ಶ್ರೀ ಕಲ್ಲಪ್ಪ ಹಾಗೂ ತಾಯಿ ಸೌ ಗಂಗಾಬಾಯಿ ಗಳ ಉದರದಿಂದ ೨೫ – ೧ – ೧೯೦೯ ರಲ್ಲಿ ತಾಯಿಯ ತವರು ಮನೆ ಹಳಿಂಗಳಿಯಲ್ಲಿ ಜನಿಸಿದ ಬಾಲಕನಿಗೆ ಭೀಮಪ್ಪ ನೆಂದು ಹೆಸರಿಡಲಾಯಿತು. ಒಕ್ಕಲುತನವನ್ನು ನಂಬಿ ಬದುಕುತ್ತಿದ್ದ ಕಲ್ಲಪ್ಪ ಹೇಳಿಕೊಳ್ಳುವಷ್ಟು ಸ್ಥಿತಿವಂತನಾಗಿರಲಿಲ್ಲ. ಇವನಿಗೆ ಇಬ್ಬರು ಗಂಡು ಮಕ್ಕಳು ಹಿರಿಯವ ಭೀಮಪ್ಪ , ಕಿರಿಯವ ಜಿನ್ನಪ್ಪ. ಹಿರಿಯ ಮಗ ಹೆಸರಿಗೆ ತಕ್ಕಂತೆ ಭೀಮ ಶರೀರಿಯಾಗಿದ್ದನು. ತಂದೆ ತಾಯಿ ಹಾಗೂ ಕಿರಿಯ ಸಹೋದರನೊಂದಿಗೆ ಬಾಲ್ಯ ಕಳೆಯುತ್ತಿದ್ದ ಭೀಮಣ್ಣ ನ ಬದುಕಿನಲ್ಲಿ ಆಕಸ್ಮಿಕವೆಂಬಂತೆ ಆಘಾತ ಬಂದೆರಗಿತ್ತು. ಇವರ ಸಂಸಾರದ ಭಾರ ಹೊತ್ತಿದ್ದ ತಂದೆ ಕಲ್ಲಪ್ಪ ಅಕಾಲಿಕ ಮರಣಕ್ಕೆ ತುತ್ತಾದನು. ಆಗ ಭೀಮಣ್ಣನಿಗೆ ಎರಡೂವರೆ ವರ್ಷ , ತಾಯಿ ಗಂಗವ್ವ ಮಕ್ಕಳಿಬ್ಬರ ಪಾಲನೆಯ ಭಾರ ಹೊರಬೇಕಾಯಿತು.

ಒಂದೆಡೆ ಸಣ್ಣ ಮಕ್ಕಳ ಪೋಷಣೆ , ಇನ್ನೊಂದು ಕಡೆ ದನ – ಕರು ಹೊಲಗಳ ಉಸಾಬರಿ. ಮತ್ತೊಂದು ಕಡೆ ಬಾಳ ಸಂಗಾತಿಯನ್ನು ಕಳೆದುಕೊಂಡ ದುಃಖ , ಈ ಸಂಕಟದಲ್ಲಿ ಗಂಗವ್ವ ಖವಟಕೊಪ್ಪದಲ್ಲಿ ಜೀವನ ಸಾಗಿಸಲು ಅಸಮರ್ಥಳಾದಳು. ಉಪಾಯಗಾಣದೆ ಮಕ್ಕಳೊಂದಿಗೆ ತವರು ಮನೆ ಹಳಿಂಗಳಿಗೆ ಬಂದಳು. ಅಲ್ಲಿ ಸೋದರ ಮಾವ ಹುಡುಗರ ಯೋಗಕ್ಷೇಮ ನೋಡಿಕೊಂಡನು. ಭೀಮಣ್ಣನಿಗೆ ಸೋದರ ಮಾವನೆಂದರೆ ಅಚ್ಚು – ಮೆಚ್ಚು. ಪ್ರತಿ ನಿತ್ಯ ಅವನೊಂದಿಗೆ ಬಸದಿಗೆ ಹೋಗುವುದು , ಮಹಾಮಂತ್ರ ಪಠಿಸುವುದನ್ನು ಅಳವಡಿಸಿಕೊಂಡನು. ದಿನಗಳೆದಂತೆ ಮಾವನ ಒತ್ತಾಯದಿಂದ ಶಾಲೆಗೆ ಹೋಗ ತೊಡಗಿದನು. ಮಹಾಬಲರ ಶಾಲಾ ಜೀವನ ಹೇಳಿಕೊಳ್ಳುವಂತಿರಲಿಲ್ಲ. ಮೂರೂರು ತಿರುಗಿ ಆರನೆಯ ಇಯತ್ತೆಯ ವರೆಗೆ ಕಲಿತನು. ಒಂದರಿಂದ ಮೂರರ ವರೆಗೆ ಹಳಿಂಗಳಿ ಯಲ್ಲಿ ನಾಲ್ಕರಿಂದ ಐದರ ವರೆಗೆ ತೇರದಾಳದಲ್ಲಿ , ಹಾಗೂ ಆರನೆಯ ತರಗತಿಯನ್ನು ಖವಟಕೊಪ್ಪ ದಲ್ಲಿ ಪೂರೈಸಿದನು. ನಂತರ ಶಾಲೆಗೆ ತಿಲಾಂಜಲಿ ಬಿಟ್ಟು ಸಂಸಾರದ ನಿರ್ವಹಣೆಗೆ ಒಕ್ಕಲುತನ ಮಾಡತೊಡಗಿದನು.

ಭೀಮಣ್ಣ[ಮಹಾಬಲ] ಶಿಕ್ಷಣ ಕಲಿಯದಿದ್ದರೂ ಬಾಲ್ಯದಿಂದಲೇ ಬಹಳ ಸಂಯಮಿಯಾಗಿದ್ದನು. ಎಷ್ಟೋ ಪ್ರಸಂಗಗಳಲ್ಲಿ ತಾನು ಮಾಡದೇ ಇರುವ ತಪ್ಪುಗಳನ್ನು ತನ್ನ ತಲೆಯ ಮೇಲೆ ಹಾಕಿಕೊಂಡು ಶಿಕ್ಷೆ ಅನುಭವಿಸುತ್ತಿದ್ದ ಪ್ರಸಂಗಗಳು ಊರಿನ ಜನರ ಮನಗಳಲ್ಲಿ ಇಂದಿಗೂ ಜೀವಂತವಾಗಿವೆ. ಕಾಲ ಕಳೆದಂತೆ ಮೈ ಮುರಿದು ದುಡಿಯುತ್ತಿದ್ದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಶಾಲಿ ಯುವಕನಾಗಿ ಬೆಳೆದನು. ಹಾಗೂ ತಾನು ದುಡಿದು ತಮ್ಮ ಜಿನ್ನಪ್ಪ ನಿಗೆ ಶಾಲೆಯನ್ನು ಕಲಿಸುತ್ತಿದ್ದನು. ಆದ್ದರಿಂದ ಈಗ ಜಿನ್ನಪ್ಪರು ವಕೀಲರಾಗಿ ಗೌರವಾನ್ವಿತ ಬದುಕು ಕಳೆಯುತ್ತಿದ್ದಾರೆ. ಭೀಮಣ್ಣ ನ ಗೆಳೆಯರೆಲ್ಲರೂ ಸಾತ್ವಿಕ ಸ್ವಭಾವದವರಾಗಿದ್ದರು. ಭೀಮಪ್ಪ ಹಗಲೆಲ್ಲ ದುಡಿದು ಸಾಯಂಕಾಲ ಜಿನಮಂದಿರದಲ್ಲಿ ಪ್ರವಚನ ಕೇಳುವ ಅಭ್ಯಾಸವನ್ನು ರೂಢಿಸಿಕೊಂಡಿದ್ದನು. ಪ್ರತಿ ಅಮವಾಸ್ಯೆಗೆ ಗೆಳೆಯರೊಂದಿಗೆ ಶ್ರೀ ಕ್ಷೇತ್ರ ಸ್ಥವನಿಧಿಯ ದರ್ಶನಕ್ಕೆ ಬರುತ್ತಿದ್ದ. ಬರುವಾಗ ತನ್ನಳತೆಯ ಶಾಸ್ತ್ರ ಗ್ರಂಥಗಳನ್ನು ತಂದು ಓದುವ ಅಭಿರುಚಿ ಬೆಳೆಸಿಕೊಂಡಿದ್ದನು. ಯೌವನಕ್ಕೆ ಕಾಲಿಡುವದಕ್ಕಿಂತ ಮುಂಚೆ ಬದುಕಿಗೆ ಸಂಯಮದ ಪಾಠ ಕಲಿಸಿದ್ದನು. ಪೂರ್ವಾಪಾರ ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಯಾಗಿ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಯಾಗಿ ರೂಪಗೊಂಡಿದ್ದನು.

ಬೆಳೆದು ದೊಡ್ಡವನಾಗಿದ್ದ ಭೀಮಪ್ಪನಿಗೆ ತಾಯಿ ಗಂಗವ್ವ ಅಣ್ಣ ಜಕ್ಕಪ್ಪನ ಹಿರಿತನದಲ್ಲಿ ೧೯೨೯ ರಲ್ಲಿ ಸೌ.ಚಂಪಾವತಿ ಯೊಂದಿಗೆ ಮಾಡುವೆ ಮಾಡಿದ್ದಳು. ಪ್ರಕೃತಿಯ ನಿಯಮಕ್ಕನುಗುಣವಾಗಿ ಭೀಮಣ್ಣ ಸಂಸಾರಿಯಾದನು. ಅವನ ಬದುಕಿನಲ್ಲಿ ತಾಯಿ ತಮ್ಮನೊಂದಿಗೆ ಹೆಂಡತಿಯೊಬ್ಬಳು ಬಂದು ಸೇರಿಕೊಂಡಿದ್ದಳು.

ಭೀಮಣ್ಣ [ಮಹಾಬಲ]ನ ಮನಸ್ಸು ವೈರಾಗ್ಯದತ್ತ

ಇತ್ತಿತ್ತಲಾಗಿ ಭೀಮಣ್ಣನ ಮನಸ್ಸು ಧರ್ಮದ ಕಡೆಗೆ ಹೆಚ್ಚೆಚ್ಚು ವಾಲುತ್ತಿತ್ತು. ಧರ್ಮ ಕ್ಷೇತ್ರಗಳ ದರ್ಶನ ಮಾಡುವ ರೂಢಿ ಹೆಚ್ಚಿಸಿಕೊಂಡನು. ೧೯೨೭ ರಲ್ಲಿ ಬಾಹುಬಲಿ[ಕುಂಭೋಜ] ದರ್ಶನಕ್ಕೆ ಹೋದಾಗ ಪ್ರಥಮಾಚಾರ್ಯ ಚಾರಿತ್ರ್ಯ ಚಕ್ರವರ್ತಿ ಆಚಾರ್ಯ ಶ್ರೀ ೧೦೮ ಶಾಂತಿಸಾಗರ ಮುನಿ ಮಹಾರಾಜರ ದರ್ಶನ ಭಾಗ್ಯ ದೊರೆಯಿತು. ೧೯೩೧ ರಲ್ಲಿ ಪ ಪೂ ೧೦೮ ಮಲ್ಲಿಸಾಗರ ಮುನಿಗಳು ಖವಟಕೊಪ್ಪಕ್ಕೆ ಬಂದಾಗ ಅವರ ಜೊತೆಯಲ್ಲಿದ್ದು ವೈಯ್ಯಾವೃತ್ತಿ ಮಾಡಿದ್ದನು. ೧೯೩೨ ರಲ್ಲಿ ಆಚಾರ್ಯ ಶ್ರೀ ಪಾಯಾಸಾಗರರು ಮಹಿಷವಾಡಿಯಲ್ಲಿ ಚಾತುರ್ಮಾಸ ಮಾಡಿದಾಗ ತಾಯಿಯೊಡನೆ ಎಂಟು ದಿನ ಅಲ್ಲಿದ್ದು ಮಹಾರಾಜರಿಗೆ ಆಹಾರ ದಾನ ಮಾಡಿ ಬಂದಿದ್ದನು. ಮಹಾರಾಷ್ಟ್ರ ರಾಜ್ಯದ ಹಾತಕಣಗಲೆ ತಾಲೂಕಿನ ಕೊರೋಚಿ ಗ್ರಾಮದಲ್ಲಿ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರು ಚಾತುರ್ಮಾಸ ಮಾಡಿದಾಗ ಎರಡನೆಯ ಸಲ ಅವರ ಅವರ ದರ್ಶನ ಪಡೆಯುವ ಅವಕಾಶ ದೊರೆತಿತ್ತು. ೧೯೪೩ ರಲ್ಲಿ ಗೋಕಾಕ ಗ್ರಾಮದ ಜಿನಾಲಯದಲ್ಲಿ ಪ ಪೂ ೧೦೮ ಪಾಯಸಾಗರ ಮಹಾರಾಜರ ಕೇಶಲೋಚನ ಸಮಾರಂಭಕ್ಕೆ ಗೆಳೆಯರೊಂದಿಗೆ ಹೋಗಿ ಬಂದಿದ್ದನು. ೧೯೪೫ ರಲ್ಲಿ ಐಲಕ ನೇಮಿಸಾಗರ ಮಹಾರಾಜರನ್ನು ಹೆಗಲ ಮೇಲೆ ಹೊತ್ತುಕೊಂಡು ನದಿ ದಾಟಿ ಖವಟಕೊಪ್ಪಕ್ಕೆ ಚಾತುರ್ಮಾಸ ಮಾಡಲು ಕರೆತಂದಿದ್ದನು. ಅವರೊಂದಿಗೆ ಅವರೊಂದಿಗೆ ನಾಲ್ಕು ತಿಂಗಳು ಜೊತೆಯಾಗಿದ್ದು , ಸೇವೆ ಮಾಡುವುದರೊಂದಿಗೆ ಮುನಿ ಧರ್ಮಾಚರಣೆಯನ್ನು ಸಮೀಪದಿಂದ ಕಂಡುಕೊಂಡಿದ್ದನು. ಗೋಕಾಕದಲ್ಲಿ ಆಚಾರ್ಯ ಶ್ರೀ ಪಾಯಸಾಗರ ಮಹಾರಾಜರ ಕೇಶಲೋಚನ ನೋಡಿ ಬಂದಾಗಿನಿಂದ ಅವರ ಶಿಷ್ಯನಾಗಬೇಕೆಂಬ ಬಯಕೆ ಅಧಿಕವಾಗಿತ್ತು. ದಿನಗಳೆದಂತೆ ಭೀಮಣ್ಣನ ಮೇಲೆ ಸಾಧುತ್ವ ಸವಾರಿ ಮಾಡಿತ್ತು.

ಭೀಮಣ್ಣನ ಮನದಲ್ಲಿ ಸಾಧುತ್ವ ನೆಲೆಸಿತ್ತು. ಅವನ ದೈನಂದಿನ ಬದುಕು ನೈತಿಕತೆಯ ಚೌಕಟ್ಟು ಅಳವಡಿಸಿಕೊಂಡಿತ್ತು. ಆಚಾರ್ಯ ಶ್ರೀ ಪಾಯಸಾಗರ ಮಹಾರಾಜರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಜಿನಾಲಯದಲ್ಲಿ ಮುಕ್ಕಾಮಿದ್ದ ಸಂಗತಿ ತಿಳಿದು , ಭೀಮಣ್ಣ ಸೋದರ ಮಾವ ಜಕ್ಕಪ್ಪನೊಂದಿಗೆ ಮಹಾರಾಜರ ದರ್ಶನಕ್ಕೆ ಬಂದನು. ೧೦೮ ಶ್ರೀ ಪಾಯಸಾಗರ ಮಹಾರಾಜರ ದರ್ಶನ ಪಡೆದು ಉಭಯ ಕುಶಲೋಪರಿಯಾದ ತರುವಾಯ ಭೀಮಣ್ಣ ಸಾವಕಾಶವಾಗಿ ದೀಕ್ಷೆಯ ವಿಷಯ ಪ್ರಸ್ತಾಪಿಸಿದನು. ಅದಕ್ಕೆ ಆಚಾರ್ಯರು ಇವನ ದೃಢತೆಯನ್ನು ಪರೀಕ್ಷಿಸು ವ ಉದ್ದೇಶದಿಂದ ಮನೆಯವರ ಅನುಮತಿ ಪಡೆದು ಬರುವಂತೆ ತಿಳಿಸಿ ಊರಿಗೆ ಕಳುಹಿಸಿದರು. ಮಾವನೊಂದಿಗೆ ಭೀಮಣ್ಣನ ದೇಹ ಮಾತ್ರ ಊರಿಗೆ ಬಂದಿತ್ತು. ಮನಸ್ಸು ಆಚಾರ್ಯರ ಸುತ್ತಲೂ ಸುಳಿಯುತ್ತಿತ್ತು. ಮಗನ ನಿರ್ಧಾರವನ್ನು ಕೇಳಿ ತಾಯಿ ಮತ್ತು ಹೆಂಡತಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಮನೆಯವರು ಅವನ ಮನಸ್ಸು ಬದಲಿಸಲು ಹಲವು ರೀತಿಯಿಂದ ಪ್ರಯತ್ನಿಸಿ ವಿಫಲರಾದರು.

ಆಚಾರ್ಯ ಶ್ರೀ ಪಾಯಸಾಗರ ಮಹಾರಾಜರು ಸಂಘ ಸಹಿತ [ಚಿಕ್ಕೋಡಿ]ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದ ೧೦೦೮ ಭ ಶ್ರೀ ಆದಿನಾಥ ದಿಗಂಬರ ಜೈನ ಮಂದಿರಕ್ಕೆ ಬಂದಿದ್ದರು. ಈ ವಿಷಯ ತಿಳಿದ ಭೀಮಣ್ಣ ಸೋದರ ಮಾವನೊಂದಿಗೆ ಗಳತಗಾಕ್ಕೆ ಬಂದನು. ಪೂರ್ವಾಪರ ವಿಚಾರ ಮಾಡಿದ ತರುವಾಯ ಆಚಾರ್ಯ ಶ್ರೀ ಪಾಯಸಾಗರ ಮಹಾರಾಜರು ಭೀಮಣ್ಣನಿಗೆ ದೀಕ್ಷೆ ಕೊಡುವುದನ್ನು ನಿಶ್ಚಯಿಸಿದರು.

ಶ್ರಾವಕ ಭೀಮಪ್ಪ ನಿಂದ ೧೦೫ ಕ್ಷುಲ್ಲಕ ಮಹಾಬಲನಾದರು

ಗಳತಗಾ ಗ್ರಾಮದ ೧೦೦೮ ಭ ಶ್ರೀ ಆದಿನಾಥ ದಿಗಂಬರ ಜೈನ ಮಂದಿರದ ಧರ್ಮ ಶಾಲೆಯು ಶ್ರಾವಕ – ಶ್ರಾವಿಕೆಯರಿಂದ ತುಂಬಿತ್ತು. ದೀಕ್ಷಾ ಗುರುಗಳಾಗಿ ಆಚಾರ್ಯ ಶ್ರೀ ಪಾಯಸಾಗರ ಮಹಾರಾಜರು ಸಿಂಹಾಸನದ ಮೇಲೆ ವಿರಾಜಮಾನರಾಗಿದ್ದರು.
ಅವರ ಬಳಿ ತುಸು ಅಂತರದಲ್ಲಿ ದೀಕ್ಷಾಭಿಲಾಷಿಯಾಗಿ ಭೀಮಣ್ಣ ಕುಳಿತಿದ್ದನು. ಸ್ಥಾನಿಕ ಪುರೋಹಿತರು ಆದ ಶ್ರೀ ಭರಮು ಉಪಾಧ್ಯೆ ಮತ್ತು ಪ್ರತಿಷ್ಠಾಚಾರ್ಯರಾಗಿದ್ದ ಶ್ರೀ ಜಿನದತ್ತ ಭು ಉಪಾಧ್ಯೆ ಇವರ ಮಂತ್ರ ಘೋಷದೊಂದಿಗೆ ದಿನಾಂಕ ೨೬ – ೧೧-೧೯೪೫ ರ ಸೋಮವಾರ ಕಾರ್ತಿಕ ವದ್ಯ ಸಪ್ತಮಿಯಂದು ಸ್ಯಾದ್ವಾದ ಕೇಸರಿ ಆಚಾರ್ಯ ಶ್ರೀ ಪಾಯಸಾಗರ ಮಹಾರಾಜರು ಭೀಮಣ್ಣನಿಗೆ ಕ್ಷುಲ್ಲಕ ದೀಕ್ಷೆ ಕೊಟ್ಟು ೧೦೫ ಕ್ಷುಲ್ಲಕ ಮಹಾಬಲ ರಂದು ನಾಮಕರಣ ಮಾಡಿದರು. ದೀಕ್ಷಾ ಗುರುವಿನ ಆದೇಶದಂತೆ ಮುನಿ ಧರ್ಮದ ಅಭ್ಯಾಸ ಮಾಡಲಿಕ್ಕೆ ಪ ಪೂ ಭಾರತ ಗೌರವ ಆಚಾರ್ಯ ಶ್ರೀ ೧೦೮ ದೇಶಭೂಷಣ ಮುನಿಗಳ ಕೋಥಳಿ ಆಶ್ರಮಕ್ಕೆ ಬಂದರು. ೧೯೪೬ ರಲ್ಲಿ ಆಚಾರ್ಯ ಶ್ರೀ ದೇಶಭೂಷಣ ರೊಂದಿಗೆ ಮಾಂಗೂರ್ ಗ್ರಾಮದಲ್ಲಿ ತಮ್ಮ ಪ್ರಥಮ ಚಾತುರ್ಮಾಸ ಮಾಡಿದರು. ಆಚಾರ್ಯ ಶ್ರೀ ದೇಶ ಭೂಷಣ ಮಹಾರಾಜರ ಸಾನಿಧ್ಯದಲ್ಲಿ ಅವಶ್ಯಕ ಶಾಸ್ತ್ರ ಜ್ಞಾನ ಪಡೆದು ಮರಳಿ ದೀಕ್ಷಾ ಗುರುಗಳಾದ ಆಚಾರ್ಯ ಶ್ರೀ ಪಾಯಸಾಗರ ಮಹಾರಾಜರ ಸಾನಿಧ್ಯ ಸೇರಿಕೊಂಡರು.

ಹನ್ನೆರಡು ವರ್ಷ ಗುರು ಸಾನಿಧ್ಯದಲ್ಲಿ ಮುನಿ ಧರ್ಮದ ಸ್ವರೂಪ ತಿಳಿದುಕೊಂಡಿದ್ದರು. ಈ ಅವಧಿಯಲ್ಲಿ ಆಚಾರ್ಯ ಶ್ರೀ ಪಾಯ ಸಾಗರರು ಕ್ಷುಲ್ಲಕ.ಮಹಾಬಲರಿಗೆ ವಿಶೇಷ ಹಿತೋಪದೇಶ ನೀಡಿದ ವಿವರ ದೊರೆಯುವುದು.

ಕ್ಷುಲ್ಲಕ ಮಹಾಬಲರಿಂದ ಶ್ರೀ ಮಹಾಬಲ ಮುನಿಗಳಾಗಿ ದೀಕ್ಷೆ ಸ್ವೀಕಾರ

ದೀಕ್ಷಾ ಗುರು ಪಾಯಸಾಗರರು ೧೯೫೮ ರಲ್ಲಿ ಸಮಾಧಿ ಮರಣ ಸಾಧಿಸಿದ ತರುವಾಯ ಆಚಾರ್ಯ ಪದ ಸ್ವೀಕರಿಸುವ ಪರಿಸ್ಥಿತಿ ಬಂದಾಗ ಅದನ್ನು ತ್ಯಜಿಸಿ ಗುರುದೇವ ಸಮಂತಭದ್ರ ರಲ್ಲಿಗೆ ಬಂದು ೨೬ – ೦೧-೧೯೬೪ ರ ಮೃಗ ನಕ್ಷತ್ರ ರವಿವಾರದಂದು ಮಹಾರಾಷ್ಟ್ರ ರಾಜ್ಯದ ಕಾರಂಜಾದ ಮಹೋತ್ಸವ ಸಂದರ್ಭದಲ್ಲಿ ಮುನಿ ದೀಕ್ಷೆ ಸ್ವೀಕರಿಸಿದರು.

ಗುರುದೇವ ಸಮಂತ ಭದ್ರರು ಸಮಾಧಿ ಮರಣ ಸಾಧಿಸಿದ ತರುವಾಯ ಮುನಿಶ್ರೀ ಮಹಾಬಲರು ಕೆಲವು ವರ್ಷ ಬಾಹುಬಲಿ [ಕುಂಭೋಜ] ಕ್ಷೇತ್ರದ ಉಸ್ತುವಾರಿ ನೋಡಿಕೊಂಡರು. ಅದು ಸಾಧನೆಗೆ ಅಡೆತಡೆ ಯಾಗುತ್ತಿರುವುದನ್ನು ಗಮನಿಸಿ , ಬೇರೆಡೆಗೆ ವಿಹಾರ ಕೈಗೊಂಡು ಧರ್ಮ ಪ್ರಭಾವನೆ ಮಾಡಿದರು. ಇವರ ಶಾಂತ ಸ್ವಭಾವಕ್ಕೆ ಶ್ರಾವಕ ಶ್ರಾವಿಕೆಯರು ಪ್ರಭಾವಿತರಾಗಿದ್ದರು. ಮುನಿಶ್ರೀ ಮಹಾಬಲ ಮಹಾರಾಜರು ತಮ್ಮ ಐವತ್ತು ವರ್ಷ ಮುನಿ ಜೀವನದಲ್ಲಿ ಕೇವಲ ೭ ಜನರಿಗೆ ದೀಕ್ಷೆ ಕೊಟ್ಟಿರುವುದುಂಟು. ಅವರಲ್ಲಿ ಒಬ್ಬರು ಮುನಿಯಾಗಿದ್ದಾರೆ ಉಳಿದವರಿಗೆ ಕ್ಷುಲ್ಲಕ ದೀಕ್ಷೆ ಕೊಟ್ಟಿದ್ದಾರೆ. ಮಹಾಬಲರು ಹೆಚ್ಚು ಕಲಿತಿರದಿದ್ದರೂ ಪ್ರತಿ ದಿನ ಡೈರಿ ಬರಿಯುವ ಪದ್ಧತಿ ರೂಢಿಸಿ ಕೊಂಡಿದ್ದರು. ಇವರೆಗೆ ಸುಮಾರು ೧೩೨ ಕ್ಕೂ ಹೆಚ್ಚು ಅವರ ಹಸ್ತ ಲಿಖಿತ ಡೈರಿಗಳು ದೊರೆತಿವೆ. ಇವು ವರ್ತಮಾನ ಇತಿಹಾಸಕ್ಕೆ ಬೆಲೆ ಕಟ್ಟಲಾರದ ಕಾಣಿಕೆಗಳಾಗಿವೆ. ಮಹಾಬಲರು ೧೯೪೬ ರಿಂದ ೧೯೯೬ ರ ವರೆಗೆ ೫೦ ಚಾತುರ್ಮಾಸ ಗಳನ್ನು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರ ದ ಪ್ರದೇಶಗಳಲ್ಲಿ ಆಚರಿಸಿ ಧರ್ಮ ಪ್ರಭಾವನೆ ಮಾಡಿ.

ಮುನಿಶ್ರೀ ಮಹಾಬಲರು ೮೭ ವರ್ಷ ೧೧ ದಿನಗಳ ಜೀವನದಲ್ಲಿ ೫೦ ವರ್ಷ ೨ ತಿಂಗಳು ೧೨ ದಿನ ತ್ಯಾಗಿಗಳಾಗಿದ್ದರು. ೧೯೯೬ ರಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳ ಗ್ರಾಮದಲ್ಲಿ ಸಲ್ಲೇಖನ ವ್ರತ ಸ್ವೀಕರಿಸುವುದಕ್ಕಿಂತ ಮುಂಚೆಯೇ ನಾಲ್ಕೈದು ವರ್ಷದಿಂದ ನಿಯಮ ಸಲ್ಲೇಖನ ತಯಾರಿ ಮಾಡಿಕೊಂಡಿದ್ದರು. ಎಂಥ ಪರಿಸ್ಥಿತಿಯಲ್ಲೂ ಡೋಲಿಯಲ್ಲಿ ಕುಳಿತು ವಿಹಾರ ಮಾಡಿದ ನಿದರ್ಶನವಿಲ್ಲ. ಇವರು ಸಲ್ಲೇಖನ ಸ್ವೀಕರಿಸುವ ಸಂಗತಿ ಆಚಾರ್ಯ ಶ್ರೀ ವಿದ್ಯಾಸಾಗರ ರಿಗೆ ಮುಟ್ಟಿದಾಗ , ಅವರು ಮುನಿ ಶ್ರೀ ಮಹಾಬಲರ ವೈಯ್ಯಾವೃತ್ತ ಮಾಡುವ ಅಭಿಲಾಷೆ ವ್ಯಕ್ತ ಪಡಿಸಿದ್ದರು. ತಮಗೆ ದೂರದ ಪ್ರಯಾಣ ಮಾಡುವ ಕ್ಷಮತೆ ಇಲ್ಲವೆಂದು ಪತ್ರ ಮುಖಾಂತರ ತಿಳಿಸಿ ತೇರದಾಳಕ್ಕೆ ಆಗಮಿಸಿದ್ದರು.

೧೦೮ ಶ್ರೀ ಶೃತಸಾಗರ ಮುನಿ ಮತ್ತು ೧೦೮ ಶ್ರೀ ವಿಜಯಭದ್ರ ಮುನಿಗಳ ನಿರ್ಯಾಪಕತ್ವದಲ್ಲಿ ಸಲ್ಲೇಖನ ಸ್ವೀಕಾರ – ಸಮಾಧಿ ಮರಣ*

ಮುನಿಶ್ರೀ ಮಹಾಬಲರು ೧೫-೧೧-೧೯೯೫ ರಂದು ಮುಂಜಾನೆ ೧೦ ಗಂಟೆಗೆ ತೇರದಾಳ ಪ್ರವೇಶಿಸಿದರು. ೨೭ – ೧೧ – ೧೯೯೫ ರಂದು ಜನ ಸಾಗರ ವನ್ನುದ್ದೇಶಿಸಿ ಪ್ರವಚನ ನೀಡಿದರು. ೨೮-೧೧-೧೧-೧೯೯೫ ರಂದು ಗುರುಕುಲ ಆಶ್ರಮದಲ್ಲಿ ಆಹಾರವಾಯಿತು. ಅಲ್ಲಿಂದ ದಿನ ಬಿಟ್ಟು ದಿನ ಆಹಾರ ಸ್ವೀಕರಿಸುವ ಕ್ರಮ ಅಳವಡಿಸಿಕೊಂಡರು. ೨೮-೧೧-೧೯೯೫ ರಂದು ಕೊನೆಯ ಘನರೂಪಿ ಆಹಾರ ಸ್ವೀಕಾರ ಮಾಡಿದರು. ಅಂದು ಮುಂಜಾನೆ ೧೦-೩೦ ಕ್ಕೆ ಸಲ್ಲೇಖನದ ನಿರ್ಯಾಪಕರಾಗಿ ಶ್ರು ಮುನಿ ಮತ್ತು ವಿಜಯಭದ್ರ ಮುನಿಗಳನ್ನು ನೇಮಿಸಲಾಯಿತು. ೩೦-೧೨-೧೯೯೫ ರಂದು ದ್ರವ ಪದಾರ್ಥ ಸ್ವೀಕರಿಸಿದರು. ೭-೧-೧೯೯೬ ರಂದು ಅಕ್ಕಿ ಗಂಜಿ ತ್ಯಜಿಸಿದರು. ೧೭-೧-೧೯೯೬ ರಂದು ಹಾಲು ತ್ಯಜಿಸಿದರು. ೨೫-೧-೧೯೯೬ ರಂದು ಮಜ್ಜಿಗೆ ತ್ಯಜಿಸಿದರು. ೨೩-೧-೧೯೯೬ ರಂದು ಅಂತಿಮ ಸಂದೇಶ ನೀಡಿದರು. ೨೮-೧-೧೯೯೬ ರಂದು ನೀರು ಸ್ವೀಕಾರ ಮಾಡಲಿಲ್ಲ. ೩೧-೧-೧೯೯೬ , ೨-೨-೧೯೯೬ [ಬುಧವಾರ , ಶುಕ್ರವಾರ] ಪ್ರಾಸುಕ ನೀರು ಸ್ವೀಕರಿಸಿದರು. ೪-೨-೧೯೯೬ ರಂದು ರ ನಿಯಮ ಸಲ್ಲೇಖನ ದ ಕೊನೆಯ ಆಹಾರವಾಗಿ ನೀರು ಸ್ವೀಕರಿಸಿದರು. ಅಂದೇ ಮುಂಜಾನೆ ೯-೧೫ ಕ್ಕೆ ವಿಧಿ ಪೂರ್ವಕ ಯಮಸಲ್ಲೇಖನ ವೃತ ಕೊಡಲಾಯಿತು.

೬-೨-೧೯೯೬ ರ ಮಂಗಳವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಶರೀರದಲ್ಲಿ ಅಶಕ್ತತೆ ಹೆಚ್ಚಾಯಿತು. ನಸುಕಿನ ನಾಲ್ಕು ಗಂಟೆಗೆ ಬಿಕ್ಕಳಿಕೆ ಪ್ರಾರಂಭವಾಯಿತು. ೭-೨-೧೯೯೬ ರ ಬೆಳಗಿನ ಆರು ಗಂಟೆಗೆ ಮುನಿಶ್ರೀ ಮಹಾಬಲರು ಯಮ ಸಲ್ಲೇಖನ ವ್ರತ ಪೂರ್ವಕ ಸಮಾಧಿ ಮರಣ ಸಾಧಿಸಿದರು.
ಅಂದು ನಾನು ಪ್ರಶಾಂತ ಜೀ ಉಪಾಧ್ಯೆ. ಗಳತಗಾ ಮತ್ತು ಗಳತಗಾ ಜೈನ ಸಮಾಜದ ಶ್ರಾವಕರು ಪ ಪೂ ೧೦೮ ಶ್ರೀ ಮಹಾಬಲ ಮುನಿಗಳ ಅಂತಿಮ ದರ್ಶನ ಪಡೆದು , ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದೆನು.
🕉️🌷🙏🙏🙏🌷🕉️
ಶಾಸ್ತ್ರ ಆಧಾರ
ಪ್ರೊ. ಬಿ. ಪಿ.ನ್ಯಾಮಗೌಡ
🕉️ ವೀರಾನ್ವಯ 🕉️
ಸರ್ವಾರ್ಥಸಿದ್ಧಿ ಗ್ರಂಥಮಾಲೆ
ಪ್ರಶಾಂತ ಜೀ ಉಪಾಧ್ಯೆ
ಗಳತಗಾ.

WhatsApp Channel Join Now
youtube Group Subscribe
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments